ಗ್ರಾನ್ಯುಲೋಮ ಇಂಗ್ವೈನಲಿ -
 	
ಡೊನೊವಾನಿಯ ಗ್ರಾನ್ಯುಲೋಮೇಟಿಸ್ ಕ್ರಿಮಿಯಿಂದ ಉಂಟಾಗುವ, ಮುಖ್ಯವಾಗಿ ಚರ್ಮದ ಅಂಟುರೋಗ. ಲೈಂಗಿಕ ರೋಗವೂ ಹೌದು.  ಜನನೇಂದ್ರಿಯದ ಮತ್ತು ಆಸುಪಾಸಿನ ಚರ್ಮದ ಮೇಲೆ ಬಹುಕಾಲ ಉಳಿದಿರುವುದು ಈ ರೋಗದ ಸ್ವಭಾವ.  ಇದರ ವ್ರಣ ತಾನಾಗಿಯೇ ಮಾಯುವುದಿಲ್ಲ.  ಸಾಮಾನ್ಯವಾಗಿ ವ್ರಣ ದೇಹದ ಒಂದೇ ಭಾಗದಲ್ಲಿ ಇರುವುದಾದರೂ ರಕ್ತಚಲನೆಯಿಂದಾಗಿ ರೋಗ ದೇಹದ ಇತರ ಕಡೆಗಳಿಗೂ ಪ್ರಸರಿಸಬಹುದು.

ಈ ರೋಗವನ್ನು ಮೊದಲು ಗುರುತಿಸಿದವ (1882) ವೈದ್ಯ ಮೆಕ್ಲಿಯೋಡ್.  ವಿಶಿಷ್ಟ ರೀತಿಯ ಸೂಕ್ಷ್ಮಜೀವಿಗಳು ಈ ರೋಗದ ವ್ರಣಗಳಲ್ಲಿವೆಯೆಂದು ಪ್ರಕಟಿಸಿದವ (1903) ಐರಿಶ್ ವೈದ್ಯನೂ ಆಗ ಮದ್ರಾಸು ಸರ್ಕಾರದ ವೈದ್ಯಸೇವೆಯಲ್ಲಿದ್ದವನೂ ಆದ ಚಾರಲ್ಸ್ ಡೊನೊವಾನ್.  ವೈದ್ಯ ಅ್ಯಂಡರ್ಸನ್ ಈ ಸೂಕ್ಷ್ಮಜೀವಿಗಳನ್ನು ತತ್ತಿಯ ಹಳದಿ ಲೋಳೆ ಚೀಲದಲ್ಲಿ ಬೆಳೆಸಲು (1903) ಸಮರ್ಥನಾದ.  ರಕ್ತಚಲನೆಯಿಂದ ಕ್ರಿಮಿಗಳ ವ್ಯಾಪನಶೀಲತೆಯನ್ನು ರಾಜಮ್ ಮತ್ತು ಸಂಗಡಿಗ ವೈದ್ಯರು 1954 ರಲ್ಲಿ ಬೆಳಕಿಗೆ ತಂದರು. ಯೂರೋಪನ್ನು ಬಿಟ್ಟು ಪ್ರಪಂಚದ ಎಲ್ಲೆಡೆಗಳಲ್ಲಿಯೂ ಈ ರೋಗ ಉಂಟು.  ಭಾರತದ ದಕ್ಷಿಣ ಪ್ರಾಂತಗಳಲ್ಲಿ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಹೆಚ್ಚಾಗಿ ಇದೆ. ಅಮೆರಿಕದ ನೀಗ್ರೋ ಮತ್ತು ದಕ್ಷಿಣ ಭಾರತದ ದ್ರಾವಿಡರಲ್ಲಿ ಹೆಚ್ಚು.  

ಡೊನೊವಾನಿಯ ಗ್ರಾನ್ಯುಲೋಮೇಟಸ್ ಎಂಬ ಕ್ರಿಮಿ ಅನೇಕ ಆಕಾರಗಳಲ್ಲಿ ಕಾಣುತ್ತದೆ.  ಲೀಷ್ಮನನ ಇಲ್ಲವೇ ಗೀಯಂಸನ ವರ್ಣಕ್ರಮದಿಂದ ಬಣ್ಣಕಟ್ಟಿ ಪರೀಕ್ಷಿಸಿದಾಗ ಇದು ಚೆನ್ನಾಗಿ ವ್ಯಕ್ತವಾಗುತ್ತದೆ. ಇವು ಕೋಶರಹಿತ. ಆದ್ದರಿಂದ ಇವುಗಳಿಗೆ ಬಣ್ಣರಹಿತ ಪರಿಧಿ ಉಂಟು. ಗುಲಾಬಿ ಬಣ್ಣದ ಕ್ರಿಮಿಗಳು ಪಿನ್ನಿನಾಕಾರದಂತೆ, ಚುಕ್ಕಿಯಂತೆ ಇಲ್ಲವೆ ಕಡ್ಡಿಯಂತೆ ಇರುತ್ತದೆ.  ಅಲ್ಲದೆ ದುಂಡನೆಯ ಅಥವಾ ಅಂಡಾಕೃತಿಯ ಗುಲಾಬಿ ಬಣ್ಣದ 0.0015 ಮಿಮೀ.  ಗಾತ್ರವಿರುವ ಕೋಶವುಳ್ಳ ಕ್ರಿಮಿಗಳನ್ನು ಕೂಡ ನೋಡಬಹುದು.  ಕ್ರಿಮಿಗಳು ಸಾಮಾನ್ಯವಾಗಿ ಚರ್ಮವನ್ನು ಆಕ್ರಮಿಸಿ ಅಲ್ಲೆ ವೃದ್ಧಿಯಾಗುತ್ತದೆ.  ಸೋಂಕುಂಟಾದ ಮೇಲೆ ರೋಗ ಗೋಚರಿಸುವ ವೇಳೆ ದಿವಸಗಳಿಂದ 5 ಮಾಸಗಳ ವರೆಗೂ ಇರಬಹುದು.  ಸಾಧಾರಣವಾಗಿ ಇದು ಹದಿನೈದು ದಿವಸಗಳಷ್ಟಿರುತ್ತದೆ.

ರೋಗಲಕ್ಷಣಗಳು: ಜನನೇಂದ್ರೀಯಗಳ ಮೇಲೆ ಮತ್ತು ತೊಡೆಸಂದುಗಳಲ್ಲಿ 1.5 - 4 ಸೆಂ.ಮೀ ಅಗಲದ ನೋವಿಲ್ಲದ ಬೊಕ್ಕೆ ಗಂಟು ಅಥವಾ ಮಿಂಚುವ ಗುಲಾಬಿ ಬಣ್ಣದ ವ್ರಣಗಳು ಏಳುತ್ತವೆ.  ಸ್ವಲ್ಪ ಕಾಲಾನಂತರ ಬೊಕ್ಕೆಗಂಟುಗಳ ಮೇಲಿನ ಪೊರೆ ಹರಿದು ವ್ರಣಗಳಾಗುವುವು.  ವ್ರಣಕ್ಕೆ ವ್ಯವಸ್ಥಿತವಾದ ಮೇರೆ ಇಲ್ಲ. ಅಲ್ಲದೆ ಅದು ನೋವನ್ನುಂಟುಮಾಡುವುದಿಲ್ಲ, ಅದು ರಕ್ತರಸವನ್ನು ಹೊರಸೂಸುತ್ತ ಗೆದ್ದಲುಗೂಡಿನಂತೆ ಹರಳು ಹರಳಾಗಿ ಗಡ್ಡೆ ಕಟ್ಟಿಕೊಂಡಿರಬಹುದು.  ಸುತ್ತಲಿನ ಚರ್ಮದ ಮೇಲೆ ಹರಡುತ್ತ ದೊಡ್ಡದಾಗುವುದು ಸಾಮಾನ್ಯ. ಆದರೆ ಆ ಸ್ಥಳಕ್ಕೆ ಸಂಬಂಧಪಟ್ಟ ದುಗ್ಧರಸ ಗ್ರಂಥಿಗಳು ದೊಡ್ಡವಾಗದೆ ಇರುವುದು ಇದರ ವೈಶಿಷ್ಟ್ಯ.  ದೇಹದ ಬೇರೆ ಕಡೆಗಳಲ್ಲಿಯೂ ಅಗಾಗ್ಗೆ  ಗ್ರಾನ್ಯುಲೋಮ ಇಂಗ್ವಿನೇಲ್‍ನಲ್ಲಿ ಕಂಡುಬರಬಹುದು. ಇಂಥವನ್ನು ಬಹುವಾಗಿ ಗುದದ್ವಾರ, ಕುತ್ತಿಗೆ ಮತ್ತು ಕಾಲುಗಳಲ್ಲಿ ಕಾಣಬಹುದು.  ರೋಗಾಣುಗಳು ರಕ್ತದ ಮೂಲಕ ಹಬ್ಬಿ ಎಲುಬು, ಯಕೃತ್ತು ಮತ್ತು ಪ್ಲೀಹಗಳಲ್ಲಿ ಗಾಯಗಳು ಕಾಣುವುವು.  ಎಲುಬು ಊತಗೊಂಡು ನೋವನ್ನು ಉಂಟುಮಾಡುತ್ತದೆ. ಯಕೃತ್ತು ರೋಗಗ್ರಸ್ತವಾಗಿ ಜಲೋದರ (ಅಸೈಟಿಸ್) ಬರುತ್ತದೆ. ವ್ರಣ ಮಾಯುತ್ತ ದಪ್ಪ ಮತ್ತು ಬಿಗಿಯುವ ಕಲೆಯಾಗಿ ಉಳಿಯುತ್ತದೆ.  ಇದು ದುಗ್ಧನಾಳಗಳ ಮೇಲೆ ಒತ್ತಡವನ್ನು ಉಂಟುಮಾಡುವುದರಿಂದ ಜನನೇಂದ್ರೀಯಗಳ ಆನೆ ಬೆಳೆಯುವುದು.  ಬಿಗಿ ಕಲೆಗಳಿಂದ ಯೋನಿದ್ವಾರ ಮತ್ತು ಗುದದ್ವಾರಗಳು ಸಂಕುಚಿತವಾಗಬಹುದು.  ಬಾಯಿಯ ಸುತ್ತವ್ರಣ ಇದ್ದು ಅದು ವಾಸಿಯಾಗದಂತೆ ಬಾಯಿ ಚಿಕ್ಕದಾಗುವುದು. ಲಿಂಗ ಅಂಡಕೋಶದಲ್ಲಿ ಹುಗಿದು ಬಿಡಬಹುದು. ಭಗೋಷ್ಠಗಳು ನಾಶವಾಗಿ ಯೋನಿ ಮತ್ತು ಗುದದ್ವಾರಗಳೆರಡೂ ಕಲೆತು ಹೋಗಬಹುದು.

ಚಿಕಿತ್ಸೆ:  ಟೆಟ್ರಸೈಕ್ಲಿನನ್ನು  ದಿವಸಕ್ಕೆ ಎರಡು ಗ್ರಾಮಿನಂತೆ ಬಾಯಿಂದ 21 ದಿನಗಳ ಕಾಲ ಕೊಡಬೇಕು.  ಚಿಕಿತ್ಸೆಯಲ್ಲಿ ಬಳಸುವ ಇತರ ಜೀವಾಣು ರೋಧಕಗಳೆಂದರೆ ಅಜಿತ್ರೊಮೈಸಿನ್ ಪ್ರತಿವಾರ ಒಂದು ಗ್ರಾಂ, ಅಥವಾ 500 ಮಿ.ಗ್ರಾಂ ಪ್ರತಿವಾರ, ಇಲ್ಲವೆ ಡೊಕ್ಸಿಸೈಕ್ಲಿನ್ 100 ಮಿ.ಗ್ರಾಂ ದಿನಕ್ಕೆ ಎರಡು ಬಾರಿ. ಇಲ್ಲವೆ ಎರಿತ್ರೊಮೈಸಿನ್ 500 ಮಿ.ಗ್ರಾಂ ದಿನಕ್ಕೆ ನಾಲ್ಕು ಬಾರಿ. ಈ ಎಲ್ಲ ಔಷಧಿಗಳನ್ನು ಬಾಯಿಂದ ಕನಿಷ್ಠ ಮೂರುವಾರಗಳ ಕಾಲ ಕೊಡಬೇಕು. ಜನನೇಂದ್ರಿಯಗಳ ವಿಕಾರವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದು ಹೊಸ  ಆಕಾರವನ್ನು ಕಲ್ಪಿಸಿ ಹೊಲಿಯಬೇಕು.  10% ರೋಗಿಗಳಲ್ಲಿ ರೋಗ ಮರುಕಳಿಸುವುದು.  ಬಿಗಿ ಕಲೆಗೆ ಗಾಯವಾದಲ್ಲಿ ವ್ರಣ ಮರಳಿ ಬರುವುದು.  ಇಂಥವರಿಗೆ ಮತ್ತೊಮ್ಮೆ ಮೇಲೆ ವಿವರಿಸಿದಂತೆ ಔಷಧಿ ಕೊಡಬೇಕು.  ಜಗ್ಗದಿದ್ದರೆ 1%  ಅಂಟಿಮೊನಿಯನ್ನು ರಕ್ತನಾಳಗಳಲ್ಲಿ 2 ಘ. ಸೆಂ.ಮೀ. ನಿಂದ ಮೊದಲು ಮಾಡಿ ಪ್ರತಿದಿವಸ ಇಲ್ಲವೆ 2, 3 ದಿವಸಗಳಿಗೊಮ್ಮೆ ದಿವಸವೊಂದರ 10 ಘ.ಸೆಂ.ಮೀವರೆಗೂ ಕೊಡಬೇಕು.  ಸಂಪೂರ್ಣ ಗುಣವಾಗಿದೆ ಎಂದು ಹೇಳಲು ಚಿಕಿತ್ಸಾ ನಂತರ ರೋಗಿಯನ್ನು ಎರಡು ವರ್ಷ ನಜರಿನಲ್ಲಿಡಬೇಕಾಗುತ್ತದೆ. ಅದರೂ ಸಂಪೂರ್ಣ ಗುಣವಾಗುವುದೆಂಬ ಭರವಸೆ ಏನೂ ಇಲ್ಲ.   ರೋಗಿಗಳು ರಕ್ತಹೀನತೆ, ಕ್ಷಯ, ಇಲ್ಲವೆ ಏಡಿಗ್ರಂಥಿ ರೋಗದಿಂದ ಸಾಯುವುದುಂಟು.
(ಎನ್.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ